Thursday, 13 March 2014

ಮನಸ್ಸಾಕ್ಷಿಯನ್ನೊಮ್ಮೆ ಕೇಳಿ.

ಬರೆಯುವ ಮುನ್ನ,
ಪೂರ್ಣಪ್ರಮಾಣದ ವಿದ್ಯಾವಂತನಲ್ಲದ ನಾನು ಫೇಸ್ ಬುಕ್ ಎಂಬ ವೇದಿಕೆಯಲ್ಲಿ ನನ್ನ ಮನಸ್ಸಿಗೆ ಸರಿ ಅನ್ನಿಸಿದ್ದನ್ನು, ಈ ಸಮಾಜದಲ್ಲಿ ತಪ್ಪುಗಳು  ಅಂತ ಕಂಡಾಗ ಮನಸ್ಸು ತಡೆಯದೇ ಬರೆಯುತ್ತಿದ್ದೇನೆ.
*ಸಿದ್ದರಾಮಯ್ಯನವರ ವಿರುದ್ದ ಬರೆದರೆ ಇವ, ಬಿಜೆಪಿಯವನು ಅಂತಲೂ
* ಯಡಿಯೂರಪ್ಪನವರ ವಿರುದ್ದ ಬರೆದಾಗ ಇವ ಕಾಂಗ್ರೇಸ್ ನವನು ಅಂತಲೂ,
* ಕುಮಾರಸ್ವಾಮಿಯವರ ಬಗ್ಗೆ ಬರೆದಾಗ ಕಾಂಗ್ರೇಸ್, ಬಿಜೆಪಿಯವನು ಅಂತಲೂ
* ಎಎಪಿ ಬಗ್ಗೆ ಸಂಘಟನೆ ಜಾಗೃತಿಯ ಬಗ್ಗೆ ವಾಸ್ತವ ಸ್ಥಿತಿಯ ಬಗ್ಗೆ ಬರೆದಾಗ,  ಇವ ಬಿಜೆಪಿಯವನು ಅಂತಲೂ
* ರವಿಬೆಳಗೆರೆಯವರ ತಪ್ಪುಗಳನ್ನು ಮಿತ್ರ ಮುಂದೆ ಇಟ್ಟಾಗ, ವಿ.ಬಿ. ಪ್ರತಾಪ ಸಿಂಹರ ಕಡೆಯವನು ಅಂತಲೂ,
* ವಿ. ಭಟ್ ಮತ್ತು ಪ್ರತಾಪಸಿಂಹರವರ ವಿರುದ್ಧ ಬರೆದಾಗ, ಇವ ರವಿಬೆಳಗೆರೆ ಪರ ಅಂತಲೂ
ತಮ್ಮ ಅಭಿಪ್ರಾಯಗಳಲ್ಲು ವ್ಯಕ್ಯಪಡಿಸುತ್ತಿದ್ದಾರೆ.
ನಾ ಯಾವ ಪರವಾಗಿಯೂ ಇಲ್ಲ ನಾ ಜನಿಸಿದ ಈ ನಾಡಿನ ಪರವಾಗಿ, ವ್ಯವಸ್ಥೆಯ ಬದಲಾವಣೆಯ ಪರವಾಗಿ, ಭ್ರಷ್ಟಾಚಾರ ಮುಕ್ತ ಸಮಾಜದ ಪರವಾಗಿ ಎಂದು ಹೇಳುತ್ತಾ,................

--------------------------------------------------------------------------------------
ಬಣ್ಣ ಬಣ್ಣದ ವೇಷ ಹಾಕುವ ವೇಷಧಾರಿ.

ತನ್ನ  ಹೊಟ್ಟೆಪಾಡಿಗೆ ಜನರೆದುರು ರಂಜಿಸುತ್ತಾನೆ. ಅದು ಅವನ ಜೀವನ.
ಈ ಹೊತ್ತಿನ ರಾಜಕಾರಣ ಮತ್ತು ಪತ್ರಿಕೋದ್ಯಮಗಳ ನಡೆಯನ್ನು ಗಮನಿಸಿ ಹೇಳುವುದಾದರೆ,
ಸ್ವಾರ್ಥ ಮತ್ತು ಹಣ ಎರಡೇ ಪ್ರಮುಖವಾಗಿ ಕಾಣುತ್ತಿದೆ.

ಯಾರಿಗೂ ಜನರ ಬಗ್ಗೆಯಾಗಲೀ, ನಾಡಿನ ಬಗ್ಗೆ ಯಾಗಲೀ ಈ ದೇಶದ ಬಗ್ಗೆಯಾಗಲೀ ಕಾಳಜಿ ಇಲ್ಲ.
ತಾನು ಬೆಳೆಯ ಬೇಕು, ತನ್ನವರು ಬೆಳೆಯಬೇಕು.
ನಾ ದುಡ್ಡು ಮಾಡಬೇಕು, ನನ್ನವರು ಸಿರಿವಂತರಾಗಬೇಕು ಇಷ್ಟೆ ಇವರ ಗುರಿ.
ಅದ್ಯಾವ ಮೌಲ್ಯಗಳನ್ನು ಇಟ್ಟುಕೊಂಡು ಸಾಮಾಜಿಕ ಜೀವನದಲ್ಲಿ ಜೀವಿಸುತ್ತಿದ್ದಾರೋ ಅರ್ಥವೇ ಆಗುತ್ತಿಲ್ಲ.

ಸ್ಟುಡಿಯೋ / ಪತ್ರಿಕಾ ಕಛೇರಿಯಲ್ಲಿ ಕುಳಿತು,  ತಾವು ಹೇಳಿದ್ದೇ ಸರಿ, ನಾವು ಬರೆದಿದ್ದೇ ಸರಿ ಅಂದುಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಪತ್ರಕರ್ತರೂ ಸಹ ರಾಜಕಾರಣಿಗಳ ಹಾದಿಯಲ್ಲಿಯೇ ನಡೆಯುತ್ತಿರುವಂತಿದೆ.

-----------------------------------------------------------------------------------
ಯುವ ಪತ್ರಕರ್ತರಾದ ಶ್ರೀ ಪ್ರತಾಪ ಸಿಂಹರವರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೇಟ್ ನೀಡಲಾಗಿದೆ

ಎಂದು ಕನ್ನಡ ಪ್ರಭದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ರವರು ಖುಷಿಯಿಂದ ಬರೆದುಕೊಂಡಿದ್ದಾರೆ.
ಒಬ್ಬ ಯುವಕನಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೊಟ್ಟಿದೆ ಪಕ್ಷ ಎಂದರೆ ಖುಷಿ ಪಡುವಂತಹ ವಿಷಯವೇ.

ಆದರೆ
ಟಿಕೆಟ್ ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಆ ಅರ್ಹತೆ ಇದೆಯೇ ?

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ,
ಶ್ರೀಯುತ ವಿಶ್ವೇಶ್ವರ ಭಟ್ ರು ತಮ್ಮ ಶಿಷ್ಯನಿಗೆ " ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ " ಕೊಡಿಸಕೊಡುವಲ್ಲಿ ಸಫಲರಾದರು.

ಅದ್ಯಾವ ಸಾಧನೆ ಮಾಡಿದ್ದಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿಕೊಟ್ಟರೋ ಗೊತ್ತಿಲ್ಲ.

ಹತ್ತಾರು ಅಂಕಣಗಳನ್ನು ಬೆತ್ತಲೆ ಜಗತ್ತಿನ ಪುಸ್ತಕಗಳನ್ನು ಬರೆದಿದ್ದೇ ಸಾಧನೆಯೇ ?
ಒಂದು ಕಾಲದಲ್ಲಿ ಚಡ್ಡಿ ದೋಸ್ತುಗಳಂತಿದ್ದವರ ವಿರುದ್ದ ಸುವರ್ಣವಾಹಿನಿಯಲ್ಲಿ ಬಹಿರಂಗವಾಗಿ "ಚರ್ಚೆಗೆ ಬನ್ನಿ ರವಿಬೆಳಗೆರೆ" ಅಂತ ಕರೆದದ್ದು, ಇವರುಗಳ ಕೆಸೆರೆಚಾಟದಲ್ಲಿ ಜನ್ಮ ಕೊಟ್ಟ ತಾಯಿಯನ್ನು ಎಳೆತಂದು ,ತಾಯಿ ಅನ್ನೋ ಪದಕ್ಕೆ ಅವಮಾನ ಮಾಡಿದ್ದು ಸಾಧನೆಯೇ ?

ಇನ್ನೊಬ್ಬ ಆಸ್ತಿ ವಿಚಾರದ ಬಗ್ಗೆ ಬೆಳಕು ಚೆಲ್ಲಲ್ಲು ಹೊರಟವರು ಮಾಡಿದ್ದು ಏನು ?
ಸರ್ಕಾರದಿಂದ ಎರಡು ಸೈಟುಗಳನ್ನು ಪಡೆದುಕೊಂಡಿದ್ದು.

* ಶ್ರೀ ನರೇಂದ್ರ ಮೋದಿಯವರ ಬಗ್ಗೆ ಪುಸ್ತಕಗಳನ್ನು ಬರೆದು ಮಾರಾಟ ಮಾಡಿ
ಲಕ್ಷಾಂತರ ರೂಗಳನ್ನು ಸಂಪಾದಿಸಿದರು.
ಕನ್ನಡಪ್ರಭ ದಿನ ಪತ್ರಿಕೆ ಅಂಕಣಗಳಲ್ಲಿ ಮೋದಿ ಪರವಾಗಿ ಬರೆದು,
ಒಂದೆರೆಡು ಬಾರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದೇ ಸಾಧನೆಯೇ ?

ಪತ್ರಿಕೋದ್ಯಮದಲ್ಲಿ ಬಹಳಷ್ಟು ಹಿರಿಯರಿದ್ದರೂ ಕರ್ನಾಟಕ ಸರ್ಕಾರದಿಂದ ಅರ್ಹತೆ ಇಲ್ಲದಿದ್ದರೂ "ರಾಜ್ಯೋತ್ಸವ ಪ್ರಶಸ್ತಿ"ಯನ್ನು ಪಡೆದುಕೊಂಡಾದ ಮೇಲೆ

ಈ ಗ
ರಾಷ್ಟ್ರ ಮಟ್ಟದಲ್ಲಿ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗುತ್ತಿರುವುದು ಸ್ವಾರ್ಥವಲ್ಲದೇ ಮತ್ತೇನೂ ಇಲ್ಲ .

ಮೈಸೂರು ಲೋಕಸಭೆ ಕ್ಷೇತ್ರದ ವಿಸ್ತಾರವನ್ನು ಸರಿಯಾಗಿ ತಿಳಿಯದ ವ್ಯಕ್ತಿ.
ಮೋದಿ ಅಲೆಯಿಂದ ಗೆದ್ದು ಸಂಸದನಾಗಿಬಿಡಬಹುದು ಎಂಬ ದೂರಾಲೋಚನೆಯಿಂದ ಯಾರ್ಯಾರನ್ನೋ ಭೇಟಿಯಾಗಿ
ಟಿಕೇಟ್ ಗಿಟ್ಟಿಸಿಕೊಂಡು ಬೀಗುತ್ತಿರುವ ಪ್ರತಾಪ ಸಿಂಹರು.
ಅದ್ಯಾವ ಅರ್ಹತೆಯ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ?

ಬಿಜೆಪಿ ಪಕ್ಷದಲ್ಲಿ ಎಷ್ಟು ಸಕ್ರೀಯರಾಗಿದ್ದಾರೆ ?

ಬಹಳಷ್ಟು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ಏನಾಗಬೇಕು
(ಅದು ಬಿಜೆಪಿ, ಕಾಂಗ್ರೇಸ್, ಜೆ.ಡಿ.ಎಸ್.  ಆಗಿರಬಹುದು)

ಶ್ರೀ ವಿಶ್ವೇಶ್ವರ ಭಟ್ಟರಿಗಾಗಲೀ ಮತ್ತು ಶ್ರೀ ಪ್ರತಾಪ ಸಿಂಹರಿಗಾಗಲೀ
ಏನೂ ಅನ್ನಿಸುವುದೇ ಇಲ್ಲವೇ ? ಇವರುಗಳಿಗೆ ಮನಸ್ಸಾಕ್ಷಿ ಎಂಬುದೇ ಇಲ್ಲವೇ ?

ಹತ್ತಾರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಪತ್ರಕರ್ತರುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅನ್ನಿಸಲೇ ಇಲ್ಲ.
ಇನ್ನು ಯುವಕ ಸಾಧನೆ 1%  ಮಾತ್ರ
ಇನ್ನು ಬಹಳಷ್ಟು ಸಾಧಿಸುವುದಿತ್ತು. ಅಷ್ಟು ಬೇಗ
"ರಾಜ್ಯೋತ್ಸವ ಪ್ರಶಸ್ತಿ" ಕೊಡಿಸಿಕೊಟ್ಟವರು ಒಬ್ಬರಾದ್ರೆ ,
ಸಿಕ್ಕಿದ್ದೇ ಸೀರುಂಡೆ ಅಂತ ಓಡೋಗಿ ಪಡೆದುಕೊಂಡಿದ್ದು.

ವಿಶ್ವೇಶ್ವರ ಭಟ್ಟರು ಶಿಷ್ಯನ ಮೇಲಿನ ಪ್ರೀತಿಯಿಂದ ಕೊಡಿಸಿರಬಹುದು.
ನನಗೆ ಅರ್ಹತೆ ಇಲ್ಲ
ಮುಂದೊಂದು ದಿನ ಪ್ರಶಸ್ತಿಯೂ ತಾನಾಗಿಯೇ ಅರಸಿಕೊಂಡು ಬರಲಿ ಆಗ ಪಡೆಯುತ್ತೇನೆ
ಹಿರಿಯರಿಗೆ ಅರ್ಹರಿಗೆ ಸಿಗಲಿ ಅಂತ ಹೇಳಬಹುದಿತ್ತು ಹೇಳುವ ಔದಾರ್ಯ ತೋರಿಸಲೇ ಇಲ್ಲ.

ಈಗಲೂ ಇದೇ ಧೋರಣೆಯೇ ?
ಮೈಸೂರು ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು,
ಶ್ರೀ ವಿಜಯಶಂಕರ್ ರವರು ಮುಗ್ಧಮನಸ್ಸಿನ ವ್ಯಕ್ತಿ.
(ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿ ಸ್ಥಾನ ಕೊಟ್ಟು ಹಾಗೆಯೇ ವಾಪಸ್ ಪಡೆದರೂ ಯಾಕೆ ಅಂತ ಕೇಳದ ವ್ಯಕ್ತಿ)

ಹಿಂದೆ ಸಂಸದರಾಗಿ ಸಾಮಾನ್ಯ ಜನರ ಜೊತೆ ಬೆರೆತಿರುವ ವ್ಯಕ್ತಿ.
ಇಂತಹ ವ್ಯಕ್ತಿಯು ಸ್ಪರ್ಧೆ ಮಾಡುವುದನ್ನು ತಡೆದು,
ತಾನು ಸ್ಪರ್ಧಿಸಿ,

ಮೋದಿ ಅಲೆಯಿದೆ ಗೆಲ್ಲುತ್ತೇನೆ ಏನೂ ಕಷ್ಟ ಪಡದೇ ಸಂಸದನಾಗಿಬಿಡುತ್ತೇನೆ ಎಂಬ ದೂರಾಲೋಚನೆಯ ದುರಾಲೋಚನೆ ತಪ್ಪು.

ಮನುಷ್ಯರಾಗಿ ಯೋಚಿಸದೇ,
ಆತುರ ಪಟ್ಟು ಕೊಂಡು, ಸಾಕಷ್ಟು ವಯಸ್ಸಿದ್ದರೂ. ದೇವರು ಬರವಣಿಗೆ ಕೊಟ್ಟಿದ್ದರೂ
ಬರೆಯುವುದು ಬಹಳಷ್ಟಿದ್ದರೂ, ಸಾಧಿಸುವುದನ್ನು ಬಿಟ್ಟು   ಸ್ವಾರ್ಥಸಾಧನೆಗೆ ಹೊರಡುವುದು ಬೇಡ.

ನಿವರೊಬ್ಬರ ಸ್ವಾರ್ಥಕ್ಕೆ ಶ್ರೀ ಸಿ. ಹೆಚ್. ವಿಜಯಶಂಕರ್ ಬಲಿಯಾಗುತ್ತಿದ್ದಾರೆ.

ಶ್ರೀ ಸಿ. ಎಸ್. ವಿಜಯಶಂಕರ್ ಅಲ್ಲದಿದ್ದರೂ
ಸಾಮಾನ್ಯ ವ್ಯಕ್ತಿ ಚುನಾವಣೆಗೆ ನಿಲ್ಲಲಿ.

ಪ್ರತಾಪ ಸಿಂಹರು ದಯವಿಟ್ಟು ಬಿಟ್ಟುಕೊಡಲಿ

ಚುನಾವಣೆಯಲ್ಲಿ ನಿಲ್ಲಲೇ ಬೇಕು ಅನ್ನೋ ಛಲ ಇದ್ದರೆ...

ಹಾಸನದಿಂದ
ಮಂಡ್ಯದಿಂದ
ಸ್ಪರ್ಧಿಸಿ ಅವರ  ಸಾಮರ್ಥ್ಯ ತೋರಿಸಲಿ, ಆಗ ಒಪ್ಪಿಕೊಳ್ಳಬಹುದು. ಅವರ ಸಾಮರ್ಥ್ಯವನ್ನು.

ಎಲ್ಲವೂ ಸುಲಭವಾಗಬೇಕು. ಇನ್ನೊಬ್ಬರನ್ನು ತುಳಿದು,
ಪತ್ರಿಕೋದ್ಯಮವನ್ನೂ  ಸ್ವಾರ್ಥಕ್ಕೆ ಬಳಸಿಕೊಂಡು,
ಸರ್ಕಾರ ಸವಲತ್ತುಗಳನ್ನೂ ಪಡೆದುಕೊಂಡು, ಜನರಿಗೆ ನೀತಿ ಹೇಳ ಹೊರಟಿರುವಂತಿದೆ.

ಇದು ಪ್ರತಾಪ ಸಿಂಹ ಎಂಬ ಹೆಸರಿಗೆ ಕಪ್ಪು ಚುಕ್ಕಿಯಂತಾಗುತ್ತಿದೆ.

"ಮಾನವರಾಗಿ ಮೊದಲು ಮಾನವರಾಗಿ,
ತಾವು ಬದುಕಿ, ಇತರರಿಗೂ ಬದುಕಲು ಬಿಡಿ."
ಸ್ವಾರ್ಥಿಗಳಾಗಬೇಡಿ. ಇನ್ನೊಬ್ಬರ ಕನಸುಗಳನ್ನು ಗುರಿಯನ್ನು ಕಸಿದುಕೊಳ್ಳಬೇಡಿ.
ಪ್ರತಾಪ ಸಿಂಹರ ಮನಸ್ಸಾಕ್ಷಿಯೂ ಅವರ ಈ ನಡೆಯನ್ನು ಒಪ್ಪುವುದಿಲ್ಲ.
ಮನಸ್ಸಾಕ್ಷಿಯನ್ನೂ ಮೀರಿ ನಡೆಯುವ ಮನುಷ್ಯ,
ಮನುಷ್ಯ ಹೇಗಾಗುತ್ತಾನೆ ?

ಒಂದು ವೇಳೆ ಮನಸ್ಸಾಕ್ಷಿಗೂ ಮೀರಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದಿಟ್ಟುಕೊಳ್ಳೋಣ.
ಲೋಕಸಭೆ ಚುನಾವಣೆಯ ವೆಚ್ಚಗಳಿಗೆ ಹಣವನ್ನು ಹೇಗೆ ಹೊಂದಿಸುತ್ತಾರೆ ?
ಪುಸ್ತಕಗಳನ್ನು ಬರೆದು ಮಾರಿದ ಹಣದಿಂದಲೇ ವೆಚ್ಚವನ್ನು ಭರಿಸಲು ಸಾಧ್ಯವೇ ?
ಪ್ರಾಮಾಣಿಕರೆಂದುಕೊಂಡಿದ್ದಾರೆ ಜನ ಇವರನ್ನು.
ಪ್ರಾಮಾಣಿಕವಾಗಿ ಹಣ ವೆಚ್ಚ ಮಾಡದೇ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವೇ ?
ಅದೂ ಈ ದಿನಗಳಲ್ಲಿ
ಹತ್ತಾರು ಕೋಟಿಗಳ ವ್ಯವಹಾರ ಸ್ವಾಮಿ !!
ಪ್ರತಾಪಸಿಂಹರೇ. ನಿಮಗೆ ತಿಳಿಯದ್ದು ಏನೂ ಇಲ್ಲ. ರೀಮ್ ಗಟ್ಟಲೇ ಬರೆದಿದ್ದಾರೆ.

(ಪ್ರತಾಪ ಸಿಂಹ ಮತ್ತು ವಿಶ್ವೇಶ್ವರ ಭಟ್ ಇವರುಗಳ ಗಮನಕ್ಕೆ ತರುವ ಸಲುವಾಗಿ ಈ ಮೇಲ್ ಮೂಲಕ ಕಳುಹಿಸಲಾಗಿದೆ)

--------------------------------

ಏನಾಗಿದೆ ಈ ಪಕ್ಷಗಳಿಗೆ ?

ರಾಜಕೀಯ ರಾಜಕೀಯ ಅಂತ ತಮ್ಮ ಮನೆ ಮಠಗಳನ್ನು ಬಿಟ್ಟು, ನಾಯಕರುಗಳೇ ಆರಾಧ್ಯ ದೇವರೆಂದು ಪೂಜಿಸುವ ಕಾರ್ಯಕರ್ತರ ಮನಸ್ಸನ್ನು ಅರಿಯದೇ ಎಲ್ಲಲ್ಲೋ ಇದ್ದವರನ್ನು ದಿಢೀರೆಂದು ಕರೆತಂದು ರತ್ನಗಂಬಳಿ ಹಾಸಿ ಚುನಾವಣೆಗೆ ಟಿಕೇಟ್ ನೀಡುತ್ತಿರುವ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರ ಶ್ರಮ ನೆನಪಿಗೆ ಬರುವುದೇ ಇಲ್ಲವೇ ?

* ನಂದನ್ ನೀಲಕೇಣಿ ಆಗಿರಬಹುದು, ಪ್ರತಾಪ ಸಿಂಹರಾಗಿರಬಹುದು
ಇವರಿಬ್ಬರೂ ರಾಜಕೀಯದಲ್ಲಿ ಎಷ್ಟು ಗುರುತಿಸಿಕೊಂಡಿದ್ದಾರೆ.
ಕಾರ್ಯಕರ್ತರ ಹಾಗೆ ಎಷ್ಟು ಕೆಲಸ ಮಾಡಿದ್ದಾರೆ.
ಪಕ್ಷದ ಸದಸ್ಯತ್ವವನ್ನೇ ಪಡೆಯದೇ
ನಾನು 55 ಸಾವಿರ ಕೋಟಿ ಖರ್ಚು ಮಾಡಿ ಆಧಾರ್ ಕಾರ್ಡ್ ಮಾಡಿದ್ದೇನೆ ಇದು ನನ್ನ ಸಾಧನೆ ಅಂತ ಬೀಗುತ್ತಿರುವ ನಂದನ್ ನೀಲಕೇಣಿಯವರಿಗೆ ಗೊತ್ತಿಲ್ಲ,

55 ಸಾವಿರ ಕೋಟಿ ಹಣ ಸಾಮಾನ್ಯ ಜನರ ಬೆವರಿನ ಹಣ ಅಂತ. ಯಾರ ದುಡ್ಡು ಯಾರು ಖರ್ಚು ಮಾಡುವುದು ? ಆಧಾರದ ಆವಾಂತರದಿಂದ 55 ಸಾವಿರ ಕೋಟಿ ಹಣ ವ್ಯರ್ಥವಾಗುತ್ತಿರುವುದು ಇವರ ಗಮನಕ್ಕೆ ಬರುತ್ತಿಲ್ಲ. ಆದರೂ ಇವರು ನುಡಿದಂತೆ ನಡೆದಿದ್ದಾರಂತೆ.

ಸುಮ್ಮನೆ ಹಾಗೆ ಗಮನಿಸಿ,
2014ರ ಈ ಚುನಾವಣೆ ವಿಶಿಷ್ಟವಾದ ಚುನಾವಣೆ.
ಬಹುಶಃ ಭಾರತದ ಇತಿಹಾಸದಲ್ಲಿ ಯುವಕರು ಹಾಗೂ ಜನರು ಚುನಾವಣೇಯ ಬಗ್ಗೆ ಆಳವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ನಮೋ ಹೆಸರಿನಲ್ಲಿ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕ್ರಾಂತಿ ಯಾಗುತ್ತಿದೆ.

ಶ್ರೀ ಚಕ್ರವರ್ತಿ ಸೂಲಿಬೆಲೆ ಅಂತಹ ವಾಗ್ಮಿಗಳು ತಮ್ಮ ತಂಡದೊಂದಿಗೆ ರಾಜ್ಯದುದ್ದಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡು, 6 ತಿಂಗಳ ಮುಂಚಿತವಾಗಿಯೇ ಯುವಕರಲ್ಲಿ ಜಾಗೃತಿ ಮೂಡಿಸಲು ನಿಂತರು.
ಪ್ರಖರ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ ಬಗ್ಗೆ ಕಾಳಜಿ ಇದೆ. ದೇಶಾಭಿಮಾನ ಇದೆ. ನಮೋ ಬಗ್ಗೆ ಮಾತಾನಾಡಿ, ಮಾತಾನಾಡಿ, ಯುವಕರಲ್ಲಿ ಶಕ್ತಿ ತುಂಬಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಮನೋಭಾವನೆ ಇದ್ದಿದ್ದರೆ
ನೇರವಾಗಿ "ಶ್ರೀ ಚಕ್ರವರ್ತಿ ಸೂಲಿಬೆಲೆ"ಯವರಿಗೆ ಟಿಕೆಟ್ ನೀಡಬಹುದಿತ್ತು.

ಇಂತಹವರನ್ನು ಬಿಟ್ಟು ತೋರಿಕೆಗೆ ಮೋದಿ ಪರ ಪುಸ್ತಕಗಳನ್ನು ಬರೆದವರೇ ಸೂಕ್ತ ಅಂತ ನಿರ್ಧರಿಸಿ ಬಿಟ್ರೇ, ಕಾರ್ಯಕರ್ತರ ಪಾಡೇನು ?

ಇನ್ನು ಆಮ್ ಆದ್ಮಿ ಇದೂ ಒಂದು ಕ್ರಾಂತಿ ಮಾಡಲು ಹೊರಟಿದೆ. ಇದು ಕೂಡ ವಿಶಿಷ್ಟ ಪ್ರಯೋಗವೇ ಸರಿ ಮೋದಿ ಅಲೆಯ ನಡುವೆಯೂ ಛಲ ಬಿಡದೇ ತಾವು ಸಹ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೊರಟವರು ಆದರೆ ಜನರಲ್ಲಿ ಜಾಗೃತಿ, ಮತ್ತು ಪಕ್ಷ ಸಂಘಟನೆಯ ಬಗ್ಗೆ ಅರಿವಿಲ್ಲದೇ ಓಡುತ್ತಿದ್ದಾರೆ. ಅವರ ಓಟವೂ ಎಲ್ಲಿಗೆ ಹೋಗಿ ಮುಟ್ಟುತ್ತೋ ನೋಡಬೇಕು.

ಅಕ್ಷರರಾಜು ದಾವಣಗೆರೆ.